ಚಕ್ರವರ್ತಿ, ಸತೀಶ ಚಂದ್ರ

1801-1968. ಭಾರತದ ಒಬ್ಬ ರಾಜಕೀಯ ಕ್ರಾಂತಿವೀರ. ಪೂರ್ವ ಬಂಗಾಲದ ಖುಲ್ನ ಜಿಲ್ಲೆಯ ಹಳ್ಳಿಯೊಂದರಲ್ಲಿ 1891ರಲ್ಲಿ ಜನಿಸಿದರು. ತಂದೆ ಛತ್ರನಾಥ, ತಾಯಿ ಮೋಕ್ಷದಾ ಸುಂದರಿ. ಸತೀಶ ಚಂದ್ರರು ಅಣ್ಣ ಬಿಪಿನ್ ಬಿಹಾರಿಯ ಘೋಷಣೆಯಲ್ಲಿ ಬೆಳೆದರು.

1905ರ ಬಂಗಾಳ ವಿಭಜನೆಯ ವಿರೋಧಿ ಚಳವಳಿಯ ಸಮಯದಲ್ಲಿ ಅವರು ಗುಪ್ತ ಸಂಘವೊಂದಕ್ಕೆ ಸೇರಿದ್ದರು. ಬರ್ಹಾಂಪುರದಲ್ಲಿ ವಿದ್ಯಾರ್ಥಿಯಾಗಿದ್ದಾಗ (1912) ಅವರು ನೇರವಾಗಿ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ಭಾಗವಹಿಸತೊಡಗಿದರು. ಅತುಲಕೃಷ್ಣ ಘೋಷರು ತಾವು ಸ್ಥಾಪಿಸಿದ್ದ ಕ್ರಾಂತಿಕಾರಿ ರಹಸ್ಯ ತಂಡದ ನಿರ್ವಹಣೆಯ ಹೊಣೆಯನ್ನು ತಾತ್ಕಾಲಿಕವಾಗಿ ಇವರಿಗೆ ವಹಿಸಿಕೊಟ್ಟಿದ್ದಾಗ ಜಿಲ್ಲೆಯಲ್ಲಿ ಅದರ ಚಟುವಟಿಕೆಗಳನ್ನು ಬೆಳೆಸಿದರು. ಇವರಿಗೆ ಪ್ರೋತ್ಸಾಹ ಕೊಟ್ಟ ಪ್ರಾಧ್ಯಾಪಕರಲ್ಲಿ ರಾಧಾಕಮಲ್ ಮುಖರ್ಜಿ ಪ್ರಮುಖರು.

ಸತೀಶಚಂದ್ರರು 1914ರಲ್ಲಿ ಬಿ.ಎ. ಮುಗಿಸಿ ನ್ಯಾಯಶಾಸ್ತ್ರ ಮತ್ತು ಎಂ.ಎ. ತರಗತಿಗಳಿಗೆ ಸೇರಿದವರು. ಆಗ ಜತೀಂದ್ರನಾಥ್ ಮುಖರ್ಜಿಯವರ ನಾಯಕತ್ವದಲ್ಲಿ ಸುಧಾರಿತ ಜುಗಾಂತರ್ ಪಕ್ಷ ಉತ್ತರ ಭಾರತದಲ್ಲಿ ಕ್ರಾಂತಿಕಾರ್ಯಗಳಲ್ಲಿ ನಿರತವಾಗಿತ್ತು. ಇದೇ ಕಾಲದಲ್ಲಿ ಅಮೆರಿಕಾದಿಂದ ಕೆಲವು ಕ್ರಾಂತಿಕಾರಿ ಪಂಜಾಬಿಗಳು ಕಲ್ಕತ್ತಕ್ಕೆ ಬಂದರು. ಅವರನ್ನು ಸತೀಶಚಂದ್ರರೂ ಅವರ ಸಂಗಡಿಗರೂ ಸುರಕ್ಷಿತವಾಗಿ ಪಂಜಾಬಿಗೆ ತಲುಪಿದರು.

ಜರ್ಮನಿಯಿಂದ ರಹಸ್ಯವಾಗಿ ಶಸ್ತ್ರಾಸ್ತ್ರಗಳನ್ನು ತರಿಸಲು ಇವರು ಮಾಡುತ್ತಿದ್ದ ಪ್ರಯತ್ನಗಳು ಸರ್ಕಾರಕ್ಕೆ ಗೊತ್ತಾದುವು. ಸತೀಶಚಂದ್ರರು ಭೂಗತರಾದರು. ಇವರ ಬಂಧನಕ್ಕಾಗಿ ಸರ್ಕಾರ ಭಾರಿ ಬಹುಮಾನ ಘೋಷಿಸಿತು. 1916ರಲ್ಲಿ ಪೋಲೀಸರು ಮನೆಯೊಂದರ ಮೇಲೆ ದಾಳಿ ಮಾಡಿ ಇವರ ಜೊತೆಗಾರರಲ್ಲಿ ಕೆಲವರನ್ನು ಬಂಧಿಸಿದರು. ಸತೀಶಚಂದ್ರರು ತಪ್ಪಿಸಿಕೊಂಡರಾದರೂ ಪೋಲೀಸರ ಕೈಗೆ ಜೀವಂತವಾಗಿ ಸಿಕ್ಕಿಬೀಳುವ ಭಯದಿಂದ ಪೊಟ್ಯಾಸಿಯಂ ಸೈಯನೈಡ್ ತಿಂದರು. ತತ್ ಕ್ಷಣವೇ ವಿಷದ ಪ್ರತಿರೋಧಕಗಳನ್ನು ಕೊಟ್ಟು ಇವರ ಜೀವ ಉಳಿಸಲಾಯಿತಾದರೂ ಇವರ ಆರೋಗ್ಯ ಕೆಟ್ಟು ದೇಹ ದುರ್ಬಲವಾಯಿತು.

ಅಮೆರಿಕದಲ್ಲಿ ಇಂಡೋ-ಜರ್ಮನ್ ಪಿತೂರಿಯೊಂದು ಬಯಲಾಗಿ, ಶಸ್ತ್ರಗಳನ್ನು ಹೊರಗಿನಿಂದ ಪಡೆಯುವ ಪ್ರಯತ್ನ ವಿಫಲವಾದುದರಿಂದ ನಿರಾಶರಾದ ಕ್ರಾಂತಿಕಾರಿಗಳು ಚಂದ್ರನಗರದಲ್ಲಿ ಆಶ್ರಯ ಪಡೆದರು. 1917ರಲ್ಲಿ ಈ ನೆಲೆಗಳನ್ನು ಪೋಲೀಸರು ಶೋಧಿಸಿದರು. ಅತುಲಕೃಷ್ಣರು ವಿನಾ ಉಳಿದವರೆಲ್ಲ ತಪ್ಪಿಸಿಕೊಂಡರು. ಸತೀಶ ಚಂದ್ರರು ಮೊದಲು ರಂಗಪುರದಲ್ಲೂ ಆನಂತರ ಆಲಿಪುರ್ ದೌರ್‍ನಲ್ಲೂ ತಲೆಮರೆಸಿಕೊಂಡಿದ್ದರು.

ಒಂದನೆಯ ಮಹಾಯುದ್ಧ ಮುಗಿದ ಬಳಿಕ ಸರ್ಕಾರ ಕ್ಷಮಾದಾನ ನೀಡಿ ಬಂಧಿತರನ್ನೆಲ್ಲ ಬಿಡುಗಡೆ ಮಾಡಿತು. ತಲೆತಪ್ಪಿಸಿಕೊಂಡಿದ್ದ ಕ್ರಾಂತಿಕಾರಿಗಳ ಬಂಧನಕ್ಕೆ ಸರ್ಕಾರ ಹೊರಡಿಸಿದ್ದ ಆಜ್ಞೆಗಳನ್ನೂ ಹಿಂದೆಗೆದುಕೊಳ್ಳಲಾಯಿತು. 1922ರಲ್ಲಿ ಸತೀಶಚಂದ್ರರು ಹೊರಗೆ ಬಂದರು. ಬ್ರಿಟಿಷ್ ಅಧಿಕಾರಿಯೊಬ್ಬನ ಕೊಲೆಯ ಸಂಬಂಧವಾಗಿ 1924ರಲ್ಲಿ ಇವರು ಬಂಧನಕ್ಕೊಳಗಾದರು.
ಸತೀಶಚಂದ್ರರು 1928ರಲ್ಲಿ ಬಿಡುಗಡೆಯಾದರು. ಭಾರತಕ್ಕೆ ಅಧಿರಾಜ್ಯದ ಸ್ಥಾನ ಬೇಕೆಂಬುದು ಆಗ ಗಾಂಧಿಯವರ ಕೇಳಿಕೆಯಾಗಿತ್ತು. ಪೂರ್ಣ ಸ್ವಾತಂತ್ರ್ಯ ಬೇಕೆಂಬುದು ಸುಭಾಷ್ ಚಂದ್ರ ಬೋಸರ ಅಭಿಮತವಾಗಿತ್ತು. ಇದರಿಂದಾಗಿ ಬಂಗಾಲದಲ್ಲಿ ಕಾಂಗ್ರೆಸಿನಲ್ಲಿ ಎರಡು ಗುಂಪುಗಳಾದುವು. ಸತೀಶ ಚಂದ್ರು ಸುಭಾಷ್ ಚಂದ್ರರಿಗೆ ಬೆಂಬಲವಾಗಿದ್ದರು. ಕಾಂಗ್ರೆಸಿನಲ್ಲಿ ಇವರು ಇದ್ದು ತಮ್ಮ ಚಟುವಟಿಕೆಗಳನ್ನು ಮುಂದುವರಿಸಿದರು.

1930ರ ಅಸಹಕಾರ ಚಳವಳಿಯ ಕಾಲದಲ್ಲಿ ಸತೀಶಚಂದ್ರು ರಹಸ್ಯ ಅಂಚೆ ವ್ಯವಸ್ಥೆಯೊಂದನ್ನು ಸಂಘಟಿಸಿದರು. 1938ರಲ್ಲಿ ಫಾರ್ವರ್ಡ್ ಬ್ಲಾಕ್ ಪಕ್ಷ ಸ್ಥಾಪನೆಯಾದಾಗ ಕಾಂಗ್ರೆಸಿನ ಪ್ರಭಾವ ಬಂಗಾಲದಲ್ಲಿ ಕುಗ್ಗಿತು. ಆಗ ಅದನ್ನು ಬೆಳೆಸಲು ಸತೀಶಚಂದ್ರರೂ ಅವರ ಜೊತೆಗಾರರೂ ಶ್ರಮಿಸಿದರು. ಭಾರತ ಬಿಟ್ಟು ತೊಲಗಿ ಚಳವಳಿಯ ಕಾಲದಲ್ಲಿ ಬಂಗಾಲದ ತಾಮ್ ಲೂಕ್ ಮತ್ತು ಬಾಲುರ್ ಘಾಟ್ ನಲ್ಲಿ ನಡೆದ ಚಳುವಳಿಯ ಯಶಸ್ಸಿಗೆ ಸತೀಶಚಂದ್ರರೇ ಕಾರಣ. 

1946ರಲ್ಲಿ ಸತೀಶ ಚಂದ್ರರು ಬಂಗಾಲದ ವಿಧಾನಸಭೆಗೆ ಆಯ್ಕೆಯಾದರು. 1947ರಲ್ಲಿ ಭಾರತ ವಿಭಜನೆಯಿಂದಾಗಿ ಇವರ ಅಣ್ಣ ನಿರಾಶ್ರಿತರಾಗಿ ತಮ್ಮ ದೊಡ್ಡ ಕುಟುಂಬದೊಡನೆ ಭಾರತಕ್ಕೆ ಬಂದರು. ಸತೀಶ ಚಂದ್ರರು ನಿರಾಶರಾಗಿದ್ದರು. ಅವರ ಆರೋಗ್ಯ ಕೆಟ್ಟಿತ್ತು. ಆದರೂ ಅಣ್ಣನ ನೆರವಿಗೆ ಇವರು ನಿಂತರು. ಅವರಿಗೆ ಅಲ್ಪ ರಾಜಕೀಯ ಪಿಂಚಣಿ ದೊರಕಿತು. 1968ರಲ್ಲಿ ಸತೀಶ ಚಂದ್ರರು ತೀರಿಕೊಂಡರು.

ಸತೀಶ ಚಂದ್ರರು ಓದು ಮುಗಿಸಿ ಸರ್ಕಾರಿ ನೌಕರಿಯ ಸುಖಜೀವನದ ಹಾದಿ ಹಿಡಿಯದೆ ತಾಯಿನಾಡಿದ ಸೇವೆಗೆ ನಿಂತು, ಕ್ರಾಂತಿಕಾರಿಯಾಗಿ, ಕಾಂಗ್ರೆಸಿಗರಾಗಿ ನಿಷ್ಠೆಯಿಂದ ದುಡಿದರು. ಜನರಲ್ಲಿ ಜಾಗೃತಿಯನ್ನು ಬಿತ್ತಿದ್ದರು. ಮಾನಸಿಕವಾಗಿ, ದೈಹಿಕವಾಗಿ ಅನೇಕ ತೊಂದರೆಗಳನ್ನು ಸಹಿಸಿದ ಇವರು ಯಾವ ಸ್ಥಾನಮಾನಗಳನ್ನೂ ಹೊಗಳಿಕೆಯನ್ನೂ ಬಯಸಲಿಲ್ಲ. ಇವರ ಇಡೀ ಜೀವನ ತ್ಯಾಗಮಯವಾದ್ದು.										*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ